ಇಸಗಲೆ-
ಬಿಳಿ ಉಪ್ಪಿಗಿಡದ ಜಾತಿಯ ಸಸ್ಯ (ಅಝೀಮ); ಕುಂಡಲಿ ಗಿಡ ಪರ್ಯಾಯನಾಮ. ಮೈತುಂಬ ಮುಳ್ಳಿನಿಂದ ಕೂಡಿರುವ ಪೊದರು. ಬೇಲಿಯ ಗಿಡವಾಗಿ ಬೆಳೆಸುವುದಿದೆ. ಈ ಜಾತಿಯಲ್ಲಿ ಮೂರು ಪ್ರಭೇದಗಳಿವೆ. ಇವನ್ನು ಉಷ್ಣವಲಯದ ಆಫ್ರಿಕ ಮತ್ತು ಏಷ್ಯಖಂಡಗಳಲ್ಲಿ ನೋಡಬಹುದು. ಭಾರತದ ಅಝಿಮ ಟೆಟ್ರಸ್ಕಾಂತ ಎಂಬ ಪ್ರಭೇದ ದಖನ್ ಪ್ರಸ್ಥಭೂಮಿಯಲ್ಲೂ ತೀರಪ್ರದೇಶಗಳಲ್ಲೂ ಬರಡು ಜಿಲ್ಲೆಗಳಲ್ಲೂ ಬೆಳೆಯುವುದು. ಒರಿಸ್ಸ ಮತ್ತು ಬಂಗಾಳದ ಸುಂದರಬನ್‍ದಲ್ಲಿಯೂ ಕಂಡುಬರುತ್ತದೆ. ಇಸಗಲೆ ಗಿಡದಲ್ಲಿ ಗಂಡು ಹೂ ಹೆಣ್ಣು ಹೂ ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ. ಹೆಣ್ಣುಗಿಡದಲ್ಲಿ ಬಿಳಿ ಬಣ್ಣದ ಹಣ್ಣುಗಳಿರುತ್ತವೆ. ಎಲೆಗಳ ರಸ ಗೊರಲಿನ ಕೆಮ್ಮಲನ್ನೂ ಹೊರ ಬೀಳುವ ಕಫವನ್ನೂ ನಿಲ್ಲಿಸುತ್ತದೆ. ಪೂರ್ವ ಆಫ್ರಿಕ ದೇಶದಲ್ಲಿ ಬೇರು ಮತ್ತು ಎಲೆಗಳನ್ನು ಹಾವಿನ ಕಡಿತಕ್ಕೆ ಔಷಧಿಯಾಗಿ ಉಪಯೋಗಿಸುತ್ತಾರೆ. ಈ ಸಸ್ಯದ ಹಣ್ಣುಗಳನ್ನು ತಿನ್ನುವ ಆಡುಗಳು ರುಚಿಕರವಾದ ಹಾಲು ಕೊಡುವುವೆಂದು ತಿಳಿದಿದೆ.												
(ಡಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ